ಕಂಠಸ್ಥ ಸಂಪ್ರದಾಯ : ಗ್ರಂಥಸ್ಥಮೂಲವನ್ನು ಅವಲಂಬಿಸದೆ ತಲೆಮಾರಿನಿಂದ ತಲೆಮಾರಿಗೆ ಕರ್ಣಾಕರ್ಣಿಯಾಗಿ ಭಾಷೆ, ಸಂಗೀತ, ಸಾಹಿತ್ಯ ಮೊದಲಾದ ಎಲ್ಲ ಬಗೆಯ ಜ್ಞಾನವನ್ನೂ ಕಾಪಾಡಿಕೊಂಡು ಬರುವ ಕ್ರಮ. ತಾಯಿಯಿಂದ ಮಗಳಿಗೆ, ತಂದೆಯಿಂದ ಮಗನಿಗೆ, ಗುರುವಿನಿಂದ ಶಿಷ್ಯನಿಗೆ, ಹಿರಿಯ ತಲೆಮಾರಿನಿಂದ ಕಿರಿಯ ತಲೆಮಾರಿಗೆ, ಪೈಕದಿಂದ ಪೈಕಕ್ಕೆ ಈ ಸಂಪ್ರದಾಯದ ಮೂಲಕ ಪರಂಪರಾನುಗತ ಜ್ಞಾನವನ್ನು ಅರ್ಪಿಸುವ ಬಗೆ ಮಾನವಕುಲಕ್ಕೆ ಸಹಜವಾಗಿ ಬಂದ ಒಂದು ವರವಾಗಿದೆ. ಪ್ರಾಣಿಕುಲಕ್ಕೂ ಮಾನವಕುಲಕ್ಕೂ ಇರುವ ಮೂಲಭೂತ ಅಂತರವನ್ನು ಇದು ಶ್ರುತಪಡಿಸುತ್ತದೆ. ಓದು, ಬರೆಹ ಬೆಳೆದಂತೆಲ್ಲ ಈ ಸಂಪ್ರದಾಯದೊಂದಿಗೆ ಗ್ರಂಥಸ್ಥ ಸಂಪ್ರದಾಯವೂ ಬೆಳೆದು ಬಂದಿತೆಂದು ತೋರುತ್ತದೆ.

ಜಾನಪದ ಸಮಗ್ರ ಸಂಸ್ಕೃತಿಯ ಎರಡು ಅಂಗಗಳೆಂದು ಜಾನಪದ ವಿದ್ವಾಂಸರು ಗುರುತಿಸಿರುವ ಶಿಷ್ಟಸಂಸ್ಕೃತಿ ಹಾಗೂ ಜನಪದ ಸಂಸ್ಕೃತಿಗಳು ಪರಸ್ಪರ ಸ್ವೀಕರಣಕ್ಕೆ ಬದ್ಧವಾಗಿದ್ದರೂ ಎರಡೂ ನಡೆದು ಬಂದಿರುವ ದಾರಿ ಬೇರೆ ಬೇರೆ. ಎರಡರಲ್ಲಿಯೂ ಪರಂಪರೆಯ ಮುದ್ರೆ ಇದ್ದೇ ಇದೆ. ಅದರ ಶಿಷ್ಟಸಂಸ್ಕೃತಿ ಗ್ರಂಥಗಳಿಂದ, ವಿದ್ವಾಂಸರಿಂದ, ಧಾರ್ಮಿಕ ವಿಧಿಗಳಿಂದ ಪರಿಷ್ಕಾರಗೊಂಡದ್ದು, ಗೊತ್ತಾದ ಮೂಲದಿಂದ ಇದು ಶಿಷ್ಟರೂಪದಲ್ಲಿ ಉಳಿದುಬರುತ್ತದೆ. ಜನಪದ ಸಂಸ್ಕೃತಿ ವ್ಯಾಪಕವಾದುದು, ಕಂಠಸ್ಥಮೂಲದಲ್ಲಿ ಮಾತ್ರ ಉಳಿದುಬರತಕ್ಕದ್ದು. ಮೊದಲಿನದರಲ್ಲಿ ವ್ಯಷ್ಟಿಯ ಪಾತ್ರ ಹೆಚ್ಚಾದರೆ ಎರಡನೆಯದರಲ್ಲಿ ಸಮಷ್ಟಿಯ ಪಾತ್ರ ಹಿರಿದು.

ಸಹಸ್ರಾರು ವರ್ಷಗಳ ಮಾನವ ಜೀವನದ ಸುದೀರ್ಘ ಇತಿಹಾಸದಲ್ಲಿ ಅಕ್ಷರ ಜ್ಞಾನ ಬಂದದ್ದು ತೀರ ಇತ್ತೀಚೆಗೆ, ಒಂದು ಅರ್ಥದಲ್ಲಿ ನೆನ್ನೆ ಮೊನ್ನೆ. ಆದ್ದರಿಂದ ಗ್ರಂಥಸ್ಥಸಂಪ್ರದಾಯ ಕಂಠಸ್ಥ ಸಂಪ್ರದಾಯಕ್ಕಿಂತ ತುಂಬ ಇತ್ತೀಚಿನದು. ಮೊದಲಿಗೆ ಸಮಗ್ರ ಮಾನವ ವ್ಯವಹಾರಗಳ ಏಕೈಕವಾಹಕವಾಗಿದ್ದುದು ಕಂಠಸ್ಥ ಸಂಪ್ರದಾಯವೇ. ಮಾನವ ಅಕ್ಷರ ಜ್ಞಾನವನ್ನು ಪಡೆದ ಮೇಲೆ ತನ್ನ ಅನುಭವದ ಸ್ವಲ್ಪ ಭಾಗವನ್ನು ಮಾತ್ರ ಗ್ರಂಥಸ್ಥಗೊಳಿಸಲು ಸಾಧ್ಯವಾಯಿತು. ಅವನ ಅನಂತಜ್ಞಾನ ರಾಶಿ ಪರಂಪರಾನುಗತವಾಗಿ ಮುಂದುವರಿಯುತ್ತ ಬಂದಿರುವುದು ಕಂಠಸ್ಥ ಸಂಪ್ರದಾಯದಿಂದಲೇ.

ಅನಕ್ಷರಸ್ಥ ಸಮಾಜಗಳಲ್ಲಿ ಕಂಠಸ್ಥಸಂಪ್ರದಾಯದ ಪಾತ್ರ ವಿಶಿಷ್ಟವಾದುದು. ಬದುಕಿಗೆ ಬೇಕಾಗುವ ಸಕಲವಿದ್ಯೆ ಹಾಗೂ ವ್ಯವಹಾರ ಜ್ಞಾನವನ್ನು ಈ ಸಂಪ್ರದಾಯದಿಂದಲೇ ಗ್ರಹಿಸಬೇಕಾಗುತ್ತದೆ. ಮನೋರಂಜನೆ ಹಾಗೂ ದೈನಂದಿನ ಆವಶ್ಯಕತೆಗಳ ಪುರೈಕೆಗೆ ಕಂಠಸ್ಥಸಂಪ್ರದಾಯದಲ್ಲಿಯೇ ಬಂದ ಜ್ಞಾನ ನೆರವಾಗುತ್ತದೆ. ಪುರಾಣ, ಐತಿಹ್ಯ, ಕಥೆ, ಗಾದೆ, ಒಗಟು, ಹಾಡು, ಲಾವಣಿ, ಭಾಷೆ, ನಂಬಿಕೆ, ಆಚರಣೆ, ಕಲೆ, ವೈದ್ಯ, ವ್ಯವಸಾಯದ ಕ್ರಮ, ಅಡುಗೆಗಳ ರೀತಿ, ಬೇಟೆಯಾಡುವ ವಿಧಾನ, ಆಟ, ಮಂತ್ರ, ಮಾಟ-ಹೀಗೆ ಎಲ್ಲವೂ ಕೇಳಿ ನೆನಪಿಡುವುದರ ಮೂಲಕ, ನೋಡಿ ಅನುಕರಿಸುವುದರ ಮೂಲಕ ಹಿರಿಯ ತಲೆಮಾರಿನಿಂದ, ಕಿರಿಯ ತಲೆಮಾರಿಗೆ ಹರಿದು ಬರುತ್ತವೆ. ಇಲ್ಲಿ ನೋಡಿ ಅನುಕರಿಸುವ ಕೆಲವು ವಿಷಯಗಳನ್ನು ಬಿಟ್ಟರೆ ಮಿಕ್ಕ ಎಲ್ಲ ವಿಷಯಗಳೂ ಕಂಠಸ್ಥ ಮೂಲದಲ್ಲಿಯೇ ಸಾಗಿ ಬರುತ್ತವೆ. ಅನುಕರಣೆಯ ಮೂಲಕ ಕಲಿಕೆ ಹಾಗೂ ಕಂಠಸ್ಥ ಸಂಪ್ರದಾಯದ ಪರಂಪರಾನುಗತ ಜ್ಞಾನವನ್ನೇ ಜಾನಪದ (ಫೋಕ್ಲೋರ್) ಎಂದು ಕರೆಯಲಾಗಿದೆ.		ಕಂಠಸ್ಥ ಸಂಪ್ರದಾಯದಲ್ಲಿ ಬಂದದ್ದೆಲ್ಲವೂ ಜಾನಪದವಾಗಬೇಕಿಲ್ಲ. ಬರೆವಣಿಗೆಯಿಲ್ಲದ ಸಂಸ್ಕೃತಿಯಲ್ಲಿ ಎಲ್ಲ ವ್ಯವಹಾರಗಳೂ ಕಂಠಸ್ಥಸಂಪ್ರದಾಯದಲ್ಲೇ ನಡೆಯುತ್ತವೆ. ರೇಡಿಯೋವನ್ನು ತಿರುಗಿಸುವ ಬಗೆ, ಬೈಸಿಕಲ್ಲನ್ನು ಸರಿಪಡಿಸುವ ಬಗೆ, ಬ್ರಷ್ಷಿನಿಂದ ಹಲ್ಲನ್ನು ಉಜ್ಜುವ ಬಗೆ-ಇವುಗಳ ಜ್ಞಾನವೂ ಕಂಠಸ್ಥಸಂಪ್ರದಾಯದಲ್ಲೇ ಬಂದರೂ ಇವನ್ನು ಜಾನಪದ ಎಂದು ಕರೆಯಲಾಗುವುದಿಲ್ಲ. ಜಾನಪದವಲ್ಲದ ಇತರ ವಿಷಯಗಳೂ ಈ ಸಂಪ್ರದಾಯದಲ್ಲಿ ಬರುವ ಸಾಧ್ಯತೆ ಇರುವುದರಿಂದ ಜಾನಪದವನ್ನು ನಿರ್ಧರಿಸಲು ಇದೊಂದೇ ಅಳತೆಗೋಲಲ್ಲ. ಆದರೆ ಯಾವುದೇ ಜಾನಪದ ಪ್ರಕಾರ ಕಂಠಸ್ಥಮೂಲದಲ್ಲಿ ಒಮ್ಮೆಯಾದರೂ ಪ್ರಸರಣವಾಗದಿದ್ದರೆ ಅದು ಜಾನಪದವಾಗಲಾರದು.
ಜಾನಪದ ಎಲ್ಲಿಯೂ ಎಂದೂ ಗ್ರಂಥಸ್ಥವಾಗಿರುವುದಿಲ್ಲ. ಆದರೆ ಕೆಲವು ಗಾದೆಗಳು, ಕಥೆಗಳು, ಗೀತೆ, ಲಾವಣಿ, ಸಂಪ್ರದಾಯಗಳು ಲೇಖಕನೊಬ್ಬನ ಕೃತಿಯಲ್ಲಿ ಸೇರಿಕೊಂಡಿರಬಹುದು. ಇವುಗಳ ಜಾನಪದತ್ವವನ್ನು ನಿರ್ಧರಿಸಲು ಕಂಠಸ್ಥಸಂಪ್ರದಾಯದ ಭಿನ್ನರೂಪಗಳನ್ನೇ ಮತ್ತೆ ತೌಲನಿಕವಾಗಿ ಅಭ್ಯಾಸ ಮಾಡಬೇಕಾಗುತ್ತದೆ.

ದೈಹಿಕ ಚಲನೆಗಳಿಗೆ ಸಂಬಂಧಿಸಿದಂತೆ ಕೆಲವು ಜಾನಪದ ಪ್ರಕಾರಗಳು ಸಾಗಿಬರುತ್ತವೆ. ಕುಣಿತಗಳು, ಸಂಜ್ಞೆಗಳು, ಆಟಗಳು, ಅಚರಣೆಗಳು ಮುಂತಾದವನ್ನು ಹೇಳಿಸಿಕೊಂಡು ಕಲಿಯುವ ಅಗತ್ಯವಿಲ್ಲ. ನಿರೀಕ್ಷೆಯಿಂದಲೇ ಅಭ್ಯಾಸದಿಂದಲೇ ಅವು ಕರಗತವಾಗುತ್ತವೆ. ಶಾಬ್ದಿಕರೂಪದಲ್ಲಿ ಇವು ಪ್ರವಹಿಸುವುದಿಲ್ಲವಾದುದರಿಂದ ಶುದ್ಧ ಕಂಠಸ್ಥ ಸಂಪ್ರದಾಯವನ್ನು ಇಲ್ಲಿ ಅರಸಬೇಕಾದುದಿಲ್ಲ. ಆದರೆ ಜಾನಪದದ ಸಾಹಿತ್ಯಕ ಬಗೆ, ಭಾಷಿಕ ಬಗೆಗಳು ಮಾತ್ರ ಕಂಠಸ್ಥಸಂಪ್ರದಾಯದಿಂದಲೇ ಬರತಕ್ಕವು.

ಜಾನಪದವನ್ನು ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸುವ ಹವ್ಯಾಸ ಎಲ್ಲ ದೇಶಗಳಲ್ಲೂ ಕಂಡುಬಂದಿದೆ. ಕಥೆ, ಗೀತೆ, ಲಾವಣಿಗಳು ಬರೆವಣಿಗೆಗೆ ಇಳಿದಾಗ ಅವುಗಳ ಸಾಹಿತ್ಯಿಕ ಸ್ವರೂಪ ಮಾತ್ರ ಉಳಿದಂತಾಗುತ್ತದೆ. ಅದರೆ ಸಂಗೀತದ ಅಂಶವೂ ಅವುಗಳಲ್ಲಿ ಪ್ರಧಾನವಾದುದರಿಂದ, ಒಂದೊಂದು ಪ್ರಕಾರಕ್ಕೂ ವಿಶಿಷ್ಟವಾದ ಮಟ್ಟುಗಳು ಪರಂಪರೆಯಿಂದಲೇ ಬಂದಿರುವುದರಿಂದ ಅವುಗಳ ಮೂಲಧಾಟಿಗಳನ್ನು ಉಳಿಸುವ ಸಾಹಸವನ್ನೂ ವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ಹೀಗೆ ಮಾಡಲು ಕಂಠಸ್ಥಪರಂಪರೆಯನ್ನು ಮೊರೆಹೋಗುವುದು ಅನಿವಾರ್ಯವಾಗುತ್ತದೆ. ಗ್ರಂಥಸ್ಥಮೂಲದಲ್ಲಿಯೂ ಕಂಠಸ್ಥಸಂಪ್ರದಾಯದ ಪ್ರಭಾವ ಇದ್ದೇ ಇದೆ. ಅಕ್ಷರಗಳಲ್ಲಿ ಹಿಡಿದಿಡಲಾಗದ ನಾದದ ಆಂಶ. ಓದುಗಾರಿಕೆಯ ವಿನ್ಯಾಸ ಮುಂತಾದುವು ಇಲ್ಲಿ ಕಂಠಸ್ಥ ಸಂಪ್ರದಾಯದಲ್ಲಿಯೇ ಬರಬೇಕಾಗುತ್ತದೆ. ಅಂಶಗಣ ಘಟಿತವಾದ ತ್ರಿಪದಿ, ಸಾಂಗತ್ಯ ಮುಂತಾದುವನ್ನು ಓದುವ ಧಾಟಿ ಪರಂಪರಾನುಗತವಾಗಿ ಬಂದದ್ದು. ಗದ್ಯವನ್ನು ವಾಚನಮಾಡುವುದರಲ್ಲಿಯೂ ಪರಂಪರಾನುಗತ ವಿನ್ಯಾಸವನ್ನು ಕಾಣಬಹುದು.
ಆಡುಮಾತಿನ ಗತ್ತು, ಉಚ್ಚಾರಣೆಯ ವೈಖರಿಗಳು ಮುಂತಾದವುಗಳಿಗೂ ಈ ಮಾತು ಅನ್ವಯವಾಗುತ್ತದೆ. ಪ್ರದೇಶದಿಂದ ಪ್ರದೇಶಕ್ಕೆ ಆಡುಮಾತಿನಲ್ಲಿ ಕಾಣಬರುವ ವೈವಿಧ್ಯವನ್ನು ಉಪಭಾಷಾ ಪರಿವೀಕ್ಷಣೆಯಿಂದ ವಿದ್ವಾಂಸರು ಗುರುತಿಸಿದ್ದಾರೆ. ಮಾತಿನ ಬೆಡಗು, ಬಿನ್ನಾಣಗಳನ್ನು ಪುಸ್ತಕ ಎಂದೂ ಹಿಡಿದಿಡಲು ಸಾಧ್ಯವಿಲ್ಲ. ಅವು ಕಂಠಸ್ಥ ಮೂಲದಲ್ಲಿ ತಾವಾಗಿಯೇ ಸಾಗಿಬರುತ್ತವೆ, ಹುಟ್ಟು, ವಿವಾಹ, ಮರಣ ಸಂಬಂಧವಾದ ಅಚರಣೆಗಳಲ್ಲಿ, ಹಬ್ಬಹರಿದಿನ, ಆರಾಧನೆ ಮುಂತಾದ ಸಂಪ್ರದಾಯಗಳಲ್ಲಿ ಕಂಠಸ್ಥ ಸಂಪ್ರದಾಯದ ಪಾತ್ರ ಸ್ವಲ್ಪ ಮಟ್ಟಿಗಾದರೂ ಇದ್ದೇ ಇರುತ್ತದೆ. ಮದುವೆ, ಒಸಗೆ ಮುಂತಾದುವನ್ನು ಕ್ರಮವತ್ತಾಗಿ ನಿರೂಪಿಸುವ ಸಾಹಿತ್ಯ ಪರಂಪರಾನುಗತವಾಗಿ ಬರುತ್ತದೆ. ಇಲ್ಲಿ ಯಾವ ಶಾಸ್ತ್ರವೂ ಕ್ರಮ ತಪ್ಪದೆ ನಡೆದುಕೊಂಡು ಬರಲು ಇದು ನೆರವಾಗುತ್ತದೆ. ಆದ್ದರಿಂದ ಆಚರಣೆ, ಸಂಪ್ರದಾಯಗಳ ಮೇಲೂ ವಾಕ್ಸಂಪ್ರದಾಯದ ಪ್ರಭಾವ ಗಣನೀಯವಾದದ್ದು.

ಪಾಶ್ಚಾತ್ಯರಲ್ಲಿ ಜನಪದ ಭಾಷೆಯ ಅಭ್ಯಾಸದಲ್ಲಿ ಕಂಠಸ್ಥ ಸಂಪ್ರದಾಯ ಎಂಬ ಮಾತಿನ ಬಳಕೆ ಇದ್ದರೂ ಕ್ರಮೇಣ ಅದು ಜನಪದ ಸಂಗೀತಕ್ಕೂ ಅಳವಟ್ಟಿತು. ಆದರೆ ಅದರ ವ್ಯಾಪ್ತಿ ಇತರ ಕ್ಷೇತ್ರವನ್ನು ಒಳಕೊಳ್ಳುವುದು ಗಮನಾರ್ಹ, ಶಿಷ್ಟ ಅಥವಾ ಶಾಸ್ತ್ರೀಯ ಸಂಗೀತದ ಮೇಲೂ ಕಂಠಸ್ಥಸಂಪ್ರದಾಯದ ಪ್ರಭಾವ ಇದ್ದೇ ಇದೆ. ತುಟಿಯಿಂದ ತುಟಿಗೆ ಹರಿದು ಬಂದ ರಾಗವಿನ್ಯಾಸ ಗುರು ಶಿಷ್ಯರ, ಹೇಳಿಕೆ ಕಲಿಕೆಗಳನ್ನೇ ಅವಲಂಬಿಸಿರುತ್ತದೆ. ಎಷ್ಟೋ ಪ್ರಸಿದ್ಧವಾದ ಕೀರ್ತನೆಗಳಲ್ಲಿ ಲಂಬೋದರ ಲಕುಮಿಕರ ಎಂಬಂತೆ ಆಯಾ ಮಾತುಗಳನ್ನೇ ಬಳಸಿ ಕಂಠಸ್ಥ ಸಂಪ್ರದಾಯದ ಹಿನ್ನೆಲೆಯಲ್ಲಿ ನಡೆದ ರಚನೆಗಳನ್ನೂ ಗಮನಿಸಬಹುದು.

ಕಂಠಸ್ಥಸಂಪ್ರದಾಯ ಜಾನಪದಕ್ಕೆ ಸಂಬಂಧಿಸಿದಂತೆ ವಿಶಿಷ್ಟವಾಗಿ ಕಂಡರೂ ಇತರ ಕ್ಷೇತ್ರಗಳಲ್ಲಿ ಅದರ ಪ್ರಭಾವ ಗೌಣವಾದುದೇನಲ್ಲ ಎಂಬ ಅಂಶ ಸ್ಪಷ್ಟ.	(ಜೆ.ಎಸ್.ಪಿ.)

ವೇದಪಾಠಕ್ರಮ: ಭಾರತ ದೇಶದಲ್ಲಿ ಬಹು ಪವಿತ್ರವೆಂದು ಪರಿಗಣಿತವಾಗಿರುವ ವೇದರೂಪದ ಜ್ಞಾನಭಂಡಾರ ಅತ್ಯಂತ ಪ್ರಾಚೀನವೆಂಬುದು ಸರ್ವಸಮ್ಮತವಾಗಿದೆ. ಅದನ್ನು ಇದ್ದಂತೆ ಇರಿಸಿ ಮುಂದುವರಿಸಿಕೊಂಡು ಬರುವ ಹೊಣೆ ಹೊತ್ತ ಪುರ್ವಜರಿಗೆ ಪ್ರಾಚೀನ ಕಾಲದಲ್ಲಿ ವೇದದ ಎಲ್ಲ ಭಾಗಗಳೂ ಶ್ರುತಪಟ್ಟು ಕಂಠಗತವಾದುವು. ಶ್ರುತದ ಆಧಾರದ ಮೇಲೆ ಕಂಠಗತ ಮಾಡಿಕೊಳ್ಳುವ ಈ ಪದ್ಧತಿ ಆಯಾ ಕಾಲದಲ್ಲಿ ಗುರು ಶಿಷ್ಯ, ತಂದೆ ಮಗ ಮುಂತಾದವರಿಂದ ಅನುಸರಿಸಲ್ಪಟ್ಟಿತು. ಅಲ್ಲದೆ, ಮುಂದೆ ಮುಂದೆ ವಂಶಪರಂಪರೆಯಲ್ಲಿ ಅದು ರೂಢಿಸಿ, ಇಂದಿಗೂ ವಿಪುಲವಾದ ವೈದಿಕಸಾಹಿತ್ಯ ಕಂಠಸ್ಥವಾಗಿ ನಿಂತಿರುವ ವಿಚಾರ ಗಮನಾರ್ಹವಾಗಿದೆ. ಅಂದರೆ ವೇದಕ್ಕಿರುವ ಶ್ರುತಿ ಎಂಬ ಹೆಸರಿಗೆ ತಕ್ಕಂತೆ ಅದರ ಪಾಠವಿನಿಮಯದ ತತ್ತ್ವ ಕಿವಿಯಿಂದ ಕೇಳಿ ಕಂಠಗತ ಮಾಡಿಕೊಳ್ಳತಕ್ಕದ್ದು. ವೇದದ ಪ್ರಾರಂಭದ ಕಾಲವೆಂದು ಹೇಳಲಾಗಿರುವ ಪ್ರ.ಶ.ಪು. 2500-500ರ ವರೆಗೆ ಅದೆಲ್ಲವನ್ನೂ ಕಂಠಸ್ಥ ಮಾಡಿಕೊಳ್ಳಬೇಕಾದುದಕ್ಕೆ ಲಿಪಿಯ ಮತ್ತು ಲೇಖನ ಸಾಮಗ್ರಿಗಳ ಅಭಾವವೆಂಬ ಚಾರಿತ್ರಿಕ ಕಾರಣವಿದ್ದರೂ ಪವಿತ್ರತೆಯ ಉಚ್ಚಸ್ಥಾನವನ್ನು ಉಚ್ಚಾರಣೆ ಮೊದಲಾದವುಗಳ ಶುದ್ಧತೆ ನಿಷ್ಕೃಷ್ಟತೆಗಳಿಂದ ಅಚ್ಚಳಿಯದೆ ಸದಾ ಇರಿಸಿಕೊಂಡು ಬರಬೇಕೆಂಬ ಮಹತ್ತ್ವಾಕಾಂಕ್ಷೆ ಆ ಸಂಪ್ರದಾಯವನ್ನು ರೂಪಿಸಿದೆಂಬುದು ಅತಿ ಮುಖ್ಯ ವಿಚಾರವಾಗಿದೆ. ಹೀಗೆ ವೈದಿಕಗ್ರಂಥಗಳನ್ನು ಕಂಠಸ್ಥಮಾಡಿಕೊಂಡು ಬಂದಿರುವ ಸಂಪ್ರದಾಯದಲ್ಲಿ ಪವಿತ್ರ ವಸ್ತು ರಕ್ಷಣೆಯ ಪ್ರಯತ್ನದ ಶಾಶ್ವತತೆಯ ದೃಷ್ಟಿ ಗಮನಾರ್ಹವಾದುದು.
ಸಹಸ್ರಾರು ವರ್ಷಗಳಲ್ಲಿ ಒಂದೊಂದು ತಲೆಮಾರಿನವರೂ ಕಲೆತು, ಕಲಿತು ಅದನ್ನು ಮುಂದುವರಿಸಲು ಸಹಾಯ ಮಾಡಿರುವ ಈ ಸಂಪ್ರದಾಯದಲ್ಲಿ ಕೆಲವು ವೈಶಿಷ್ಟ್ಯಗಳಿವೆ. ಅದು ಆಯಾ ಕೃತಿಯನ್ನು ಕಂಠಗತಮಾಡಿಕೊಳ್ಳುವ ಪ್ರಯತ್ನ ಮಾತ್ರವಲ್ಲ; ಮೂಲಪಾಠದ ಅಕ್ಷರ, ಪದ, ಪದರಚನೆ, ಸ್ವರ ಇವೆಲ್ಲವೂ ಚಾಚೂ ತಪ್ಪದೆ, ವ್ಯತ್ಯಾಸವಾಗದೆ ಇರುವಂತೆ ಮಾಡುವ ವ್ಯವಸ್ಥೆಯನ್ನೂ ಆ ಸಂಪ್ರದಾಯ ಒಳಗೊಂಡಿದೆ. ಅದಕ್ಕೋಸ್ಕರ ಸಂಹಿತಾಪಾಠವೆಂದು ಕರೆಯಲ್ಪಟ್ಟಿರುವ ಮೂಲವನ್ನು ಕಂಠಗತಮಾಡಿಕೊಳ್ಳುವುದರ ಜೊತೆಗೆ ಅದನ್ನು ಪದಗಳಾಗಿ ವಿಂಗಡಿಸಿ ಬಂದ ಪದಪಾಠವೂ ಕಂಠಗತವಾಗಬೇಕು-ಅಂದರೆ, ಒಂದು ಮಂತ್ರದ ಸಂಹಿತಾಪಾಠದಲ್ಲಿ ಇರುವ ಅಕ್ಷರಗಳ ಸಂಖ್ಯೆ ಹನ್ನೆರಡು ಎನ್ನೋಣ, ಅವುಗಳಲ್ಲಿ ಒಂದೊಂದನ್ನೂ ಸಂಧಿ ಮುಂತಾದವುಗಳ ದೃಷ್ಟಿಯಿಂದ ಬೇರ್ಪಡಿಸಿ ಹೇಳಬೇಕು, ಅನಂತರ ಮೊದಲಿನಿಂದ ಪ್ರಾರಂಭಿಸಿ ಒಂದನೆಯ ಪದವನ್ನೂ ಎರಡನೆಯದನ್ನೂ ಪಠಿಸಿ ಮುಂದೆ ಎರಡು ಮೂರು, ಮೂರು ನಾಲ್ಕು ಈ ವಿಧವನ್ನನುಸರಿಸಿ ಬಂದಿರುವ ಕ್ರಮಪಾಠ, ಆಮೇಲೆ ಒಂದು ಎರಡು, ಎರಡು ಒಂದು, ಒಂದು ಎರಡು, ಎರಡು ಮೂರು-ಹೀಗೆ ಮಂತ್ರದ ಹನ್ನೆರಡು ಪದಗಳಲ್ಲೂ ಮುಂದುವರಿಯುವ ಜಟಾಪಾಠ, ಬಳಿಕ, ಒಂದು ಎರಡು, ಎರಡು ಒಂದು, ಒಂದು ಎರಡು ಮೂರು, ಮೂರು ಎರಡು ಒಂದು, ಒಂದು ಎರಡು ಮೂರು-ಈ ರೀತಿಯ ಘನಪಾಠ.

ಹೀಗೆ ಕಂಠಗತ ಮಾಡಿಕೊಳ್ಳಬೇಕಾದ ಪಾಠಗಳು-ಸಂಹಿತಾ, ಪದ, ಕ್ರಮ, ಜಟಾ, ಘನ-ಈ ಐದು ಹೆಚ್ಚು ಬಳಕೆಯಲ್ಲಿರತಕ್ಕವು. ಇವಲ್ಲದೆ ಮಾಲಾ, ಶಿಖಾ, ರೇಖಾ, ಧ್ವಜ, ದಂಡ, ರಥ ಎಂಬ ಪಾಠಗಳೂ ಇವೆ. ಪದಗಳ ಕ್ರಮಬದ್ಧ ಪುನರುಚ್ಚಾರಣೆಯೇ ಈ ಎಲ್ಲ ಪಾಠಗಳ ಮುಖ್ಯನಿಯಮ.

ಅತಿ ವಿಸ್ತಾರವಾಗಿರುವ ಸಂಹಿತಾಪಾಠವೊಂದನ್ನಲ್ಲದೆ, ಈ ನಾನಾ ಪಾಠಗಳನ್ನೂ ಅಷ್ಟೇ ಏಕೆ, ವೈದಿಕ ಸಾಹಿತ್ಯವೆಲ್ಲವನ್ನೂ ಸಂಸ್ಕೃತಸಾಹಿತ್ಯದ ಬಹುಭಾಗಗಳನ್ನೂ ಇಂದಿನವರೆಗೂ ಕಂಠಸ್ಥ ಮಾಡಿಕೊಂಡು ಬಂದಿರತಕ್ಕ ಈ ಸಂಪ್ರದಾಯ ಜಗತ್ತಿನ ಅಚ್ಚರಿಗಳಲ್ಲೊಂದಾಗಿದೆ.		(ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ